ಜಗತ್ತು -
 	ಜಗತ್ತಿನ ಕಲ್ಪನೆ ಮತ್ತು ಅದರ ಸೃಷ್ಟಿಯ ವಿಷಯದಲ್ಲಿ ಪ್ರಪಂಚದ ನಾನಾ ಪ್ರದೇಶಗಳಲ್ಲಿ ನೆಲೆಸಿದ್ದ ಪ್ರಾಚೀನಜನ ತಮ್ಮತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿರುವುದು ಕಂಡುಬರುತ್ತದೆ. ಭರತವರ್ಷಕ್ಕೆ ಸಂಬಂಧಿಸಿದಂತೆ ವೇದದಲ್ಲಿಯೂ ಜಗತ್ತಿನ ಬಗ್ಗೆ ವಿಚಾರ ಚರ್ಚೆ ನಡೆದಿವೆ. ಅಲ್ಲಿ ಮೊದಮೊದಲು ಅಸ್ಪಷ್ಟವಾಗಿದ್ದ ನಾನಾ ಅಭಿಪ್ರಾಯಗಳು ಕ್ರಮೇಣ ಪರಿಷ್ಕøತವಾಗಿವೆಯಾದರೂ ಸೃಷ್ಟಿಯ ಬಗೆಗಿನ ವಿಚಾರಗಳು ಮಾತ್ರ ಖಚಿತವಾಗಿ ರೂಢವಾಗಲಿಲ್ಲ. ಉಪನಿಷತ್ತುಗಳಲ್ಲಿ ವಿವಿಧ ಅಭಿಪ್ರಾಯಗಳನ್ನು ಸಾಮರಸ್ಯಕ್ಕೆ ತರುವ ಪ್ರಯತ್ನ ನಡೆದಿದೆ. ಪುರಾಣಗಳಲ್ಲಿ ಹೆಚ್ಚು ಕಡಿಮೆ ಏಕಾವಾಕ್ಯತೆಯಿದೆ. ಆದರೂ ಜಗತ್ತಿನ ಕಲ್ಪನೆ ಮಾತ್ರ ಬಹುಶಃ ಕಾಲ್ಪನಿಕವಾಗಿದೆಯೇ ಹೊರತು ಸಮ್ಯಕ್ ಸಂಗ್ರಹೀತ ವಿಷಯಗಳ ಮೇಲೆ ಆಧಾರಿತವಾಗಿಲ್ಲ.

 	ಜಗತ್ ಸ್ವರೂಪ : ವೇದ ಸಂಹಿತೆಗಳಲ್ಲಿ ಹೇಳಿರುವಂತೆ ಜಗತ್ತು ಮೂರು ಭಾಗವಾಗಿದೆ : ಪೃಥ್ವೀ, ಅಂತರಿಕ್ಷ ಮತ್ತು ದ್ಯೌ : ಅನೇಕಶಃ ಇನ್ನೂ ಸಂಕ್ಷೇಪವಾಗಿ ದ್ಯಾವಾ ಪೃಥಿವೀ (ದ್ಯೌ ಮತ್ತು ಪೃಥ್ವಿ) ಎಂದೂ ಹೇಳಲಾಗಿದೆ. ಬೃಹದಾರಣ್ಯಕೋಪನಿಷತ್ತಿನ ಪ್ರಕಾರ ಪೃಥ್ವೀ, ಅಪ್, ವಾಯು, ಅಂತರಿಕ್ಷ, ಗಂಧರ್ವ, ಸೂರ್ಯ, ಚಂದ್ರ, ನಕ್ಷತ್ರ, ಇಂದ್ರ, ಪ್ರಜಾಪತಿ, ಬ್ರಹ್ಮಲೋಕಗಳು ಕ್ರಮವಾಗಿ ಒಂದರ ಮೇಲೊಂದು ಇವೆ. ಒಂದಕ್ಕೊಂದು ಹೆಣೆದುಕೊಂಡಿವೆ. ತೈತ್ತಿರೀಯ ಅರಣ್ಯಕ ಏಳು ಲೋಕಗಳನ್ನು ಹೇಳುತ್ತದೆ : ಭೂಃ, ಭುವಃ, ಸುವಃ, ಮಹಃ, ಜನಃ, ತಪಃ, ಸತ್ಯಃ, ಸತ್ಯಂ, ಆರುಣೇಯ ಉಪನಿಷತ್ತು ಏಳು ಪಾತಾಳಗಳನ್ನು ಹೇಳುತ್ತದೆ. ಅತಲ, ಪಾತಾಲ, ವಿತಲ, ಸುತಲ, ರಸಾತಲ, ಮಹಾತಲ, ತಲಾತಲ, ಪುರಾಣಗಳಲ್ಲಿ ತ್ರಿಭುವನ ಅಥವಾ ತ್ರೈಳೋಕ್ಯಗಳಲ್ಲಿ ಮಧ್ಯಲೋಕ ಅನೇಕಶಃ ಕೆಳಭಾಗಕ್ಕೆ ಹತ್ತಿರವಾಗಿದೆ. ಇದೇ ಪೃಥಿವೀ. ಇದು ಬೃಹತ್ ಆದತಟ್ಟೆಯ ಆಕಾರದಲ್ಲಿ ಐವತ್ತು ಕೋಟಿ ಯೋಜನ ವಿಸ್ತಾರವಾಗಿದೆ. ಸುತ್ತಲೂ ಲೋಕಾಲೋಕ ಪರ್ವತಗಳಿವೆ. ಅನೇಕ ಖಂಡಗಳು ಮತ್ತು ಸಾಗರಗಳಿಂದ ಕೂಡಿದ ಪೃಥಿವಿಯ ಮೇಲುಭಾಗಕ್ಕೆ ಸ್ವರ್ಗ, ಕೆಳಕ್ಕೆ ಪಾತಾಳ, ವಸ್ತುತಃ ಹದಿನಾಲ್ಕು ಲೋಕಗಳಿಂದ ಕೂಡಿದ ಜಗತ್ತು ಎರಡು ಭಾಗ: ಏಳು ಊಧ್ರ್ವಲೋಕಗಳು-ಭೂರ್ಲೋಕ, ಭುವರ್ಲೋಕ, ಸುವರ್ಲೋಕ, ಮಹೋಲೋಕ, ಜನಲೋಕ, ತಪೋಲೋಕ, ಸತ್ಯಲೋಕ, ಏಳು ಅಧೋಲೋಕಗಳು-ಅತಲ, ವಿತಲ, ನಿತಲ, ಗಭಸ್ತಿಮತ್, ಮಹಾತಲ, ಸುತಲ, ಪಾತಾಲ. ಇವುಗಳ ಜೊತೆಗೆ ನರಕ-ಎಲ್ಲಿಯೋ ಜಗತ್ತಿನ ಅತ್ಯಂತ ಕೆಳಭಾಗದಲ್ಲಿ; ಅವುಗಳ ಸಂಖ್ಯೆ ನಿರ್ದಿಷ್ಟವಾಗಿಲ್ಲ.

 	ಪಾತಾಳ ಲೋಕಗಳಲ್ಲಿ ಒಂದೊಂದೂ 10,000 ಯೋಜನ ದೀರ್ಘವಾಗಿದೆ. ಅಲ್ಲಿ ನಾಗರು ದೈತ್ಯರು ದಾನವರು ವಾಸಮಾಡುವರು. ಸೌಂದರ್ಯ ಮತ್ತು ಆಢ್ಯತೆಯಲ್ಲಿ ಇವು ಸ್ವರ್ಗಕ್ಕೆ ಸರಿಸಮನಾಗಿವೆ. ಪಾತಾಳದ ಕೆಳಗೆ ಆದಿಶೇಷ ತನ್ನ ಹೆಡೆಗಳ ಮೇಲೆ ಬ್ರಹ್ಮಾಂಡವನ್ನೆಲ್ಲ ಹೊತ್ತಿದ್ದಾನೆ.

 	ಭೂಲೋಕದ ಮೇಲೆ ಸೂರ್ಯನವರೆಗೆ ಭುವರ್ಲೋಕ. ಸೂರ್ಯನಿಂದ ಧ್ರುವನಕ್ಷತ್ರವರೆಗೆ ಸ್ವರ್ಲೋಕ. ಈ ಮೂರೂ ಕಲ್ಪದ ಕೊನೆಯಲ್ಲಿ ನಾಶವಾಗುತ್ತವೆ. ಧ್ರುವನಕ್ಷತ್ರದಿಂದ 10 ಕೋಟಿ ಯೋಜನವಿದೆ. ಮಹೋಲೋಕ. ಜನ ತಪ ಸತ್ಯಲೋಕಗಳು ತಮ್ಮ ಹಿಂದಿನ ಲೋಕದಿಂದ ಕ್ರಮವಾಗಿ 20,80,120 ಕೋಟಿ ಯೋಜನಗಳಿವೆ. ಮಹದಾದಿ ಲೋಕಗಳಿಗೆ ಕಲ್ಪದ ಕೊನೆಯಲ್ಲಿ ನಾಶವಿಲ್ಲ; ಅಲ್ಲಿ ವಾಸಮಾಡುವವರು ಮುಂದಿನದಕ್ಕೆ ಹೋಗುತ್ತಾರೆ.

 	ನರಕ : ನರಕಗಳು ಇರುವುದು ಪಾತಾಳದ ಕೆಳಗೆ. ಆದರೆ ಅವುಗಳ ಸ್ಥಳ ನಿರ್ದಿಷ್ಟವಾಗಿಲ್ಲ. ಬಹುಶಃ ಮೊದಲಿಗೆ ನರಕಕ್ಕೂ ಪಾತಾಳಲೋಕಕ್ಕೂ ವ್ಯತ್ಯಾಸವಿದ್ದಿಲ್ಲ. ಜೈನರಲ್ಲಿ ಏಳು ಪಾತಾಳಗಳ ಬದಲು ಏಳು ನರಕಗಳನ್ನು ಹೇಳುವುದನ್ನು ಇಲ್ಲಿ ನೆನೆಯಬಹುದು.

 	ವ್ಯಾಸ ತನ್ನ ಯೋಗಭಾಷ್ಯದಲ್ಲಿ ಬೇರೊಂದು ವರ್ಣನೆ ನೀಡುತ್ತಾನೆ. ಬ್ರಹ್ಮಾಂಡ ಪ್ರಧಾನದ ಒಂದು ತುಣುಕು. ಒಂದರ ಮೇಲೊಂದರಂತೆ ಏಳು ಭೂಮಿಗಳಿವೆ. 1 ಕೆಳಗಿನದು ಭೂಃ-ಕೆಳಗಿನ ನರಕದಿಂದ ಮೇರುವಿನ ತುದಿಯವರೆಗೆ. 2 ಅಂತರಿಕ್ಷ-ಧ್ರುವನಕ್ಷತ್ರದವರೆಗೆ 3 ಸ್ವರ್ ಅಥವಾ ಮಹೇಂದ್ರಲೋಕ 4 ಮಹರ್ ಅಥವಾ ಪ್ರಾಜಾಪತ್ಯಲೋಕ 5-7 ಜನ, ತಪ, ಸತ್ಯ-ಇವು ಮೂರು ವಿಧವಾದ ಬ್ರಹ್ಮಲೋಕಗಳು. ಭೂಮಿಯ ಕೆಳಗೆ ಏಳು ನರಕಗಳು ಒಂದರ ಮೇಲೊಂದಾಗಿವೆ. ಅವೀಛಿ, ಘನ, ಅಲಿಲ, ಅನಲ, ಅನಿಲ, ಆಕಾಶ, ತಮಃಪ್ರತಿಷ್ಠಾ. ನರಕದ ಪ್ರಸಿದ್ಧ ಹೆಸರಾದ ಅವೀಛಿಯನ್ನು ಬಿಟ್ಟರೆ ಇತರವು ಪುರಾಣಗಳಲ್ಲಿ ಹೇಳಲಾದ ಬ್ರಹ್ಮಾಂಡದ ಹೊದಿಕೆಗಳೇ ಎನಿಸುತ್ತವೆ. ಬಹುಶಃ ಈ ಕಾರಣದಿಂದಲೇ ವ್ಯಾಸ ಇವುಗಳಿಗೆ ಬೇರೆ ಹೆಸರುಗಳನ್ನು ಕೊಡುತ್ತಾನೆ : ಮಹಾಕಾಲ, ಅಂಬರೀಷ, ರೌರವ, ಮಹಾರೌರವ, ಕಾಲಸೂತ್ರ, ಅಂಧತಮಿಸ್ರ. ನರಕಗಳ ಮೇಲೆ ಏಳು ಪಾತಾಳಗಳು : ಮಹಾತಲ, ರಸಾತಲ, ಅತಲ, ಸುತಲ, ನಿತಲ, ತಲಾತಲ, ಪಾತಾಲ, ಏಳು ಪಾತಾಳಲೋಕಗಳ ಮೇಲೆ ವಸುಮತೀ-ಭೂಮಿ. ಒಂದರ ಸುತ್ತ ಒಂದರಂತೆ ಅದರಲ್ಲಿ ಏಳು ಖಂಡಗಳಿವೆ.

 	ಜಗತ್ ಸ್ವರೂಪದ ಈ ವಿಸ್ತಾರವಾದ ತಿಳಿವಳಿಕೆ ಧ್ಯಾನಗೋಚರವಾಯಿತೆಂದು ಪತಂಜಲಿ ತನ್ನ ಯೋಗಸೂತ್ರದಲ್ಲಿ ಹೇಳಿದ್ದಾನೆ. ಉಮಾಸ್ವಾತಿಯೂ ತತ್ತ್ವಾಧಿಗಮ ಸೂತ್ರದಲ್ಲಿ ಹಾಗೆಯೇ ನುಡಿದಿದ್ದಾನೆ. ಪೌರಾಣಿಕ ವರ್ಣನೆ ನಂಬುಗೆಯ ವಿಷಯ ಖಗೋಳಶಾಸ್ತ್ರ ಜಗತ್ತಿನ ವೈಜ್ಞಾನಿಕ ಚಿತ್ರವನ್ನು ಕೊಟ್ಟರೂ ಹಳೆಯ ಅಭಿಪ್ರಾಯ ಬದಲಾಗಲಿಲ್ಲ. ಖಗೋಳ ವಿಜ್ಞಾನಿಗಳು ತಮ್ಮ ವಿಜ್ಞಾನದ ಆಧಾರದ ಮೇಲೆ ಸಂಪ್ರದಾಯವನ್ನು ತಿದ್ದುವ ಯತ್ನ ಮಾಡಿದರು. ಸೂರ್ಯಸಿದ್ಧಾಂತದ ಪ್ರಕಾರ ಬ್ರಹ್ಮಾಂಡ ಟೊಳ್ಳಾಗಿದೆ. ಇದರೊಳಗೆ ಒಂದು ವೃತ್ತ ವ್ಯೋಮಪಥ ಎನಿಸುತ್ತದೆ. ಇದರೊಳಗೆ ನಕ್ಷತ್ರಗಳು ಚಲಿಸುತ್ತವೆ. ಅಂತೆಯೇ ಕ್ರಮವಾಗಿ ಒಂದರ ಕೆಳಗೊಂದು ಶನಿ, ಗುರು, ಮಂಗಳ, ಸೂರ್ಯ, ಶುಕ್ರ, ಬುಧ, ಚಂದ್ರರು ಚಲಿಸುತ್ತಾರೆ. ಕೆಳಗೆ ಕ್ರಮವಾಗಿ ಸಿದ್ಧರು, ವಿದ್ಯಾಧರರು, ಮೋಡಗಳು, ಭೂಮಿ ಗೋಳಾಕಾರದಲ್ಲಿದೆ. ಈ ಗೋಳದ ಮಧ್ಯದಿಂದ ಎರಡೂ ಕಡೆ ಚಾಚಿಕೊಂಡಂತೆ ಚಿನ್ನದ ಬೆಟ್ಟವಾದ ಮೇರು ಇದೆ.

 	ಜಗತ್ ಸೃಷ್ಟಿ : ವಿಶ್ವಸೃಷ್ಟಿಯನ್ನು (ಮನೆಯಂತೆ) ಕಟ್ಟುವಿಕೆ, ಯಾನಮಾಡುವುದು ಅಥವಾ ನೇಯುವುದು ಎಂದು ಬಣ್ಣಿಸಲಾಗಿದೆ. ದ್ಯೌಃ ಮತ್ತು ಪೃಥವಿಗಳು ದೇವತೆಗಳ ತಂದೆ ತಾಯಿಗಳು; ಆದರೂ ದೇವತೆಗಳಿಂದಲೇ ನಿಷ್ಪನ್ನವಾದುದು. ಇಂದ್ರ, ಅಗ್ನಿ, ರುದ್ರ, ಸೋಮ, ವಿಶ್ವಕರ್ಮ ಇವರಲ್ಲಿ ಒಬ್ಬರೋ ಅಥವಾ ಎಲ್ಲ ದೇವತೆಗಳೂ ಒಟ್ಟಾಗಿಯೋ (ವಿಶ್ವೇದೇವಾಃ) ದ್ಯೌಃ ಮತ್ತು ಪೃಥಿವಿಗಳನ್ನು ಸೃಷ್ಟಿಸಿದರು. ಆದಿತಿ-ದಕ್ಷರು ವಿಶ್ವಕ್ಕೆ ಮೂಲವೆಂದು ಹೇಳಿ ಅವರು ಪರಸ್ಪರ ಉತ್ಪಾದಕರೆಂದು ಋಗ್ವೇದದಲ್ಲಿ ತಿಳಿಸಲಾಗಿದೆ. ಅವರಿಬ್ಬರೂ ಒಂದೇ ಮೂಲದಿಂದ ಬಂದಿರುವವರು ಎಂದು ಇದರಿಂದ ತಿಳಿಯಬಹುದು. ಇದರಲ್ಲಿ ಸ್ತ್ರೀಪುರುಷ ತತ್ತ್ವಗಳು ಸೂಚಿತವಾಗಿವೆ. ವಿರಾಟ್‍ರೂಪವಾದ ಪುರುಷನಿಂದ ದೇವತೆಗಳೂ ಜಗತ್ತೂ ಸೃಷ್ಟಿತವಾದುವೆಂದು ಪುರುಷಸೂಕ್ತ ಸಾರುತ್ತದೆ. ಆ ಪುರುಷನನ್ನು ಒಂದೆಡೆ ಅಜ, ಏಕಪಾದ, ವಿಶ್ವಕರ್ಮ ಎಂದು ಕರೆದಿದ್ದಾರೆ. ಇನ್ನೊಂದೆಡೆ ಆ ಪ್ರಥಮಜನು (ಮೊದಲು ಕಾಣಿಸಿಕೊಂಡವನು) ಯಾರು ಎಂದು ಪ್ರಶ್ನಿಸಲಾಗಿದೆ. ಇದರಿಂದ ಜಗತ್ಕಾರಣನಾದ ದೇವತೆ ಪುರುಷ-ಪ್ರಜಾಪತಿಗೆ ಕಃ (ಯಾರು) ಎಂದೇ ಹೆಸರಿಸಲಾಯಿತು. ಅಂದರೆ ಅ ತತ್ತ್ವ ಅವ್ಯಕ್ತ ಅನಂತ ಎಂದು ಅರ್ಥ. ಋಗ್ವೇದದ ಹಲವು ಸೂಕ್ತಗಳು ಸೃಷ್ಟಿಯನ್ನು ಪ್ರಸ್ತಾಪಿಸುತ್ತವೆ. ಹಿರಣ್ಯಗರ್ಭ ಎಲ್ಲ ಭೀತಜಾತಗಳಿಗೂ ಒಡೆಯ; ದ್ಯಾವಾಪೃಥಿವಿಗಳಿಗೆ ಆಧಾರಭೂತನಾದವ. ಇವನೊಬ್ಬನೆ ಸೃಷ್ಟಿಗೆ ಪೂರ್ವದಲ್ಲಿದ್ದ. ಇವನಿಂದ ಸೃಷ್ಟಿ ಮೊದಲಾಯಿತು. ನಾಸದೀಯ ಸೂಕ್ತ ಹೀಗೆ ಹೇಳುತ್ತದೆ : ಆಗ (ಸೃಷ್ಟಿಗೆ ಪೂರ್ವದಲ್ಲಿ) ಅಸತ್ತೂ ಇರಲಿಲ್ಲ, ಸತ್ತೂ ಇರಲಿಲ್ಲ. ಲೋಕಗಳು ಇರಲಿಲ್ಲ. ಹಗಲು ರಾತ್ರಿಗಳಿರಲಿಲ್ಲ. ಇವನ್ನೆಲ್ಲ ಆವರಿಸಿದ ಯಾವುದಾದರೂ ವಸ್ತುವಿತ್ತೇ? ಗಹನವಾದ ಗಂಭೀರವಾದ ಉದಕ ಆವರಿಸಿತ್ತೇ? ಯಾವುದೂ ಇಲ್ಲ. ಶ್ವಾಸೋಚ್ಛ್ವಾಸ ರಹಿತವಾದ ಜಡವಸ್ತುವನ್ನು ಸಚೇತನವಾಗಿ ಮಾಡಬಲ್ಲ ಬ್ರಹ್ಮವಸ್ತುವಿಗಿಂತ ಬೇರಾವುದೂ ಇರಲಿಲ್ಲ. ದಟ್ಟವಾದ ಕತ್ತಲೆ ಎಲ್ಲೆಲ್ಲಿಯೂ ಕವಿದಿತ್ತು. ಎಲ್ಲ ಉದಕಮಯವಾಗಿತ್ತು. ಆಗ ಆ ಅವ್ಯಕ್ತಸ್ವರೂಪ ಸೃಷ್ಟಿಮಾಡಬೇಕೆಂಬ ಧ್ಯಾನರೂಪವಾದ (ಸಂಕಲ್ಪ) ಮಹಿಮೆಯಿಂದ ಕಾರ್ಯರೂಪವಾದ ಜಗತ್ತಾಗಿ ಪರಿಣಮಿಸಿತು. ಈ ಸೃಷ್ಟಿ ಯಾವ ವಸ್ತುವಿನಿಂದ ಯಾರಿಂದ ಉಂಟಾಯಿತು ಎಂದು ಯಾರು ಹೇಳಬಲ್ಲರು? ದೇವತೆಗಳೂ ಸೃಷ್ಟಿಗೆ ಈಚಿನವರು. ಆದ್ದರಿಂದ ಅವರಿಗೂ ತಿಳಿದಿಲ್ಲ. ಸೃಷ್ಟ್ಯಾತ್ಮಕವಾದ ಯಜ್ಞವನ್ನು ದಾರಗಳಿಂದ ನೇಯಲಾಯಿತು. ಈ ಯಜ್ಞದಿಂದ ಜಗತ್ ಸೃಷ್ಟಿಯಾಯಿತು. ಇದನ್ನು ಋಷಿಗಳು ಧ್ಯಾನಯೋಗದಿಂದ ತಿಳಿದರು.

 	ಪ್ರಜಾಪತಿ ಜಗತ್ತನ್ನು ಸೃಷ್ಟಿಸಿದ ಎಂದು ಬ್ರಾಹ್ಮಣಗಳು ಹೇಳುತ್ತವೆ. ಪ್ರಜಾಪತಿಗೆ ಸೃಷ್ಟಿಸಬೇಕೆಂಬ ಇಚ್ಛೆಯುಂಟಾಯಿತು; ಅದಕ್ಕಾಗಿ ತಪಸ್ಸುಮಾಡಿದ ಅನಂತರ ಪ್ರಜಾಸೃಷ್ಟಿಮಾಡಿದ ಇಂಥ ಮಾತುಗಳು ಹಲವೆಡೆ ಬರುತ್ತವೆ. ಮೊದಲು ನೀರಿ ಇತ್ತು ಅದರ ಮೂಲಕ ಪ್ರಜಾಪತಿ ಸೃಷ್ಟಿಮಾಡಿದ ಎಂದೂ ಹೇಳಿದೆ. ಪ್ರಜಾಪತಿ ಸೃಷ್ಟಿಸಿದನೆಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ ಪ್ರಸಂಗಕ್ಕೆ ತಕ್ಕಂತೆ ಕ್ರಮದಲ್ಲಿ ವ್ಯತ್ಯಾಸ ಇದೆ; ಆದ್ದರಿಂದ ಬೇರೆ ಬೇರೆಯಾಗಿ ಕಾಣುತ್ತದೆ.

 	ಉಪನಿಷತ್ತುಗಳಲ್ಲೂ ನಾನಾ ಬಗೆಯ ನಿರೂಪಣೆ ಇದೆ. ಜಗತ್ತಿನ ಮೂಲ ಕಾರಣವನ್ನು ಪ್ರಜಾಪತಿ ಎನ್ನುವುದರ ಜೊತೆಗೆ ಬ್ರಹ್ಮ, ಆತ್ಮ, ಸತ್, ಅಸತ್ ಮುಂತಾಗಿ ಕರೆಯಲಾಗಿದೆ. ಸೃಷ್ಟಿಗೆ ಮೊದಲು ಏನಾದರು ಇತ್ತೇ (ಸತ್) ಅಥವಾ ಏನೂ ಇರಲಿಲ್ಲವೆ (ಅಸತ್) ಎಂಬುದನ್ನು ವಿಚಾರಮಾಡಲಾಗಿದೆ. ಶೂನ್ಯದಿಂದ ಜಗತ್ತಿರಲಿ ಏನೊಂದು ಆವಿರ್ಭವಿಸದು ಎಂದು ಋಷಿಗಳು ನಂಬಿದ್ದರು. ಸೃಷ್ಟಿ ಎಂಬುದನ್ನು ಜೀವತತ್ತ್ವದ ಅಥವಾ ಆತ್ಮಶಕ್ತಿಯುಳ್ಳ ಪದಾರ್ಥದ ಅವಶ್ಯಕತೆ ಎಷ್ಟು ಎಂಬುದನ್ನು ಕಂಡುಕೊಂಡರು. ಅನಂತರ ಆ ತತ್ತ್ವಕ್ಕೆ ಪುರುಷನ ಆಕಾರ ಕೊಟ್ಟರು (ಬೃಹದಾರಣ್ಯಕೋಷನಿಷತ್). ಅದನ್ನು ವಿರಾಟ್ ಸ್ವರೂಪವೆಂದು ಐತರೇಯ ಹೇಳುತ್ತದೆ. ಎಲ್ಲಕ್ಕೂ ಮೂಲವಾಗಿ ಆಪಃ (ನೀರು) ಇತ್ತು. ಅದರಿಂದ ಸತ್ಯ, ಅದರಿಂದ ಬ್ರಹ್ಮ, ಅದರಿಂದ ಪ್ರಜಾಪತಿ-ಹೀಗೆ ಕ್ರಮವಾಗಿ ಜನಿಸಿದರು. (ಬೃಹದಾರಣ್ಯಕ). ವಾಯುವೇ ಆದಿಯಲ್ಲಿತ್ತು; ಕೊನೆಗೆ ಅದರಲ್ಲೆ ಎಲ್ಲವೂ ಲಯವಾಗುತ್ತದೆ ಲಯವಾಗುತ್ತದೆ ಎಂದು ಛಾಂದೋಗ್ಯ ಹೇಳುತ್ತದೆ. ಹೀಗೆಯೇ ಅಗ್ನಿ (ಕಠ), ಆಕಾಶ (ಛಾಂದೋಗ್ಯ), ತತ್ತ್ವಗಳು ಮೂಲಭೂತವಾದುವು ಎಂದು ಹೇಳಲಾಗಿದೆ. ಅಸತ್ತಿನಿಂದಲೇ ಜಗತ್ತು ಹೊರಟಿತೆಂದೂ ಉಕ್ತವಾಗಿದೆ (ತೈತ್ತಿರೀಯ), ಇದಕ್ಕೆ ಮೃತ್ಯು ಅತವಾ ಕ್ಷುತ್ ಎಂದೂ ಹೆಸರು (ಬೃಹದಾರಣ್ಯಕ). ಇಲ್ಲಿ ಅಸತ್ ಎಂದಾಗ ಸಂಪೂರ್ಣ ಶೂನ್ಯ ಎಂದು ತಿಳಿಯಬಾರದು. ಅದು ಸಾಪೇಕ್ಷ. ಅನಂತರದ ಭೌತಿಕ ಇರುವಿಕೆಗೆ ಹೋಲಿಸಿದಾಗ ಆದಿಯಲ್ಲಿ ನಾಮರೂಪಗಳಿಲ್ಲದೆ ಇದ್ದುದಕ್ಕೆ ಅಸತ್ ಎನ್ನಲಾಗುವುದು. ಅಸತ್ ತಾನೇ ಸತ್ ಆಗಿ ಬದಲಾವಣೆ ಹೊಂದಿ ಬೆಳೆಯಿತು. ಬೆಳೆದು ಒಂದು ದೊಡ್ಡ ಮೊಟ್ಟೆಯಾಯಿತು. (ಬ್ರಹ್ಮಾಂಡ-ಹಿರಣ್ಯಗರ್ಭ). ಅಂಡವನ್ನು ಸೃಷ್ಟಿಸಿದ ಬ್ರಹ್ಮ ಅದನ್ನೇ ಪ್ರವೇಶಿಸಿತು ಎಂದು ಒಂದೆಡೆ ಹೇಳಿದೆ. ಕೆಲವು ಕಾಲಾನಂತರ ಅದು ಚಿನ್ನದ ಮತ್ತು ಬೆಳ್ಳಿಯದಾಗಿ ಇಬ್ಭಾಗವಾಯಿತು. ಬೆಳ್ಳಿಯ ಭಾಗ ಭೂಮಿ ಮತ್ತು ಚಿನ್ನದ ಭಾಗ ಸ್ವರ್ಗಗಳಾದವು. ಗಟ್ಟಿಯಾದ ಹೊದಿಕೆಯೇ ಪರ್ವತಗಳು; ತೆಳುವಾದುವು ಮೋಡಗಳು. ಅದರ ನಾಳಗಳೇ ನದಿಗಳು. ಅದರಲ್ಲಿದ್ದ ಜಲಾಂಶವೇ ಸಾಗರಗಳು. ಅದರಿಂದ ಹೊರಬಂದಿದ್ದು ಸೂರ್ಯ (ಛಾಂದೋಗ್ಯ). ಸತ್ ಒಂದೇ ಮೊದಲಿತ್ತು. ಅದಕ್ಕೆ ವರ್ಧಿಸಬೇಕೆನಿಸಿತು. ಅಗ್ನಿ ಉತ್ಪತ್ತಿಯಾಯಿತು. ಅಗ್ನಿಯಿಂದ ಅಷ್ ಮತ್ತು ಅದರಿಂದ ಪೃಥ್ವಿಯೂ ಹುಟ್ಟಿದವು (ಛಾಂದೋಗ್ಯ) ಮೊದಲು ಹುಟ್ಟಿದ ಈ ಮೂರು ಭೂತಗಳು ಸ್ವತಂತ್ರವಾಗಿದ್ದಾಗ ಸೃಷ್ಟಿ ಸಾಧ್ಯವಾಗಲಿಲ್ಲ. ತ್ರಿವೃತ್‍ಕರಣದಲ್ಲಿ ಪರಸ್ಪರ ಮಿಳಿತವಾದಾಗ ವಿಶ್ವ ರೂಪಿತವಾಯಿತು. ಪ್ರತಿಯೊಂದು ಭೂತದ ¼ ಭಾಗ ಇತರ ಭೂತಗಳ ಳಿ ಭಾಗದೊಡನೆ ಸೇರುತ್ತದೆ. ಇದೇ ತ್ರಿವೃತ್‍ಕರಣ (ವಾಯು, ಆಕಾಶ ಸೇರಿ ಐದು ಭೂತಗಳಾದರೆ (ತೈತ್ತರೀಯ) ಒಂದೊಂದರ ⅛ ಭಾಗ ಸೇರುತ್ತದೆ. ಇದೇ ವೇದಾಂತದಲ್ಲಿ ಹೇಳಿರುವ ಪಂಚೀಕರಣ). ಸೃಷ್ಟಿಕರ್ತ ಸೃಷ್ಟಿಸಬೇಕೆಂದು ಇಚ್ಛಿಸಿದ ಅನಂತರ ತಾನೇ ಸತ್ (ಪ್ರಕಟವಾಗಿರುವುದು) ಮತ್ತು ತ್ಯತ್ (ಅಪ್ರಕಟಿತವಾಗಿರುವುದು) ಆಗಿ ಮಾರ್ಪಟ್ಟ.

 	ಪುರಾಣಗಳಲ್ಲಿ ಸೃಷ್ಟಿ ಇನ್ನೂ ಹೆಚ್ಚು ವಿಸ್ತಾರವಾಗಿ ಪ್ರಸ್ತಾಪಿತವಾಗಿದೆ. ಒಂದೊಂದರಲ್ಲಿ ಒಂದೊಂದು ತೆರನಾಗಿ ನಿರೂಪಿತವಾಗಿದ್ದರೂ ಕೆಲವಾರು ಅಂಶಗಳು ಎಲ್ಲ ಪುರಾಣಗಳಿಗೂ ಸಮಾನವಾಗಿವೆ : 1 ಬ್ರಹ್ಮ ಅಥವಾ ಆತ್ಮವೇ ನಾರಾಯಣ ವಿಷ್ಣು ಅಥವಾ ಆಯಾ ಪುರಾಣದ ದೇವತೆ. 2 ಆದಿಯಲ್ಲಿ ನೀರು ಅಥವಾ ಕತ್ತಲು ಇತ್ತು. 3 ಅದರಲ್ಲಿ ಪುರುಷ ಅಥವಾ ಹಿರಣ್ಯಗರ್ಭ ಕಾಣಿಸಿಕೊಂಡ. 4 ಬ್ರಹ್ಮಾಂಡದಿಂದ ಬ್ರಹ್ಮ, ಪ್ರಜಾಪತಿ ಅಥವಾ ಪಿತಾಮಹ ಜನ್ಮತಾಳಿದ. 5 ಕಮಲ ಬ್ರಹ್ಮನ ಹುಟ್ಟುಸ್ಥಳ. 6 ಮರೀಚಿ ಮೊದಲಾದ ಏಳು ಅಥವಾ ಎಂಟು ಮಾನಸಪುತ್ರರು ಅವಾಂತರ ಸೃಷ್ಟಿಕರ್ತರು.

 	ಪುರುಷ ಮತ್ತು ಪ್ರಕೃತಿ-ಎರಡು ಮೂಲತತ್ತ್ವಗಳು. ಪ್ರಕೃತಿ ಮೂರು ಗುಣಗಳಿಂದ ಕೂಡಿದೆ. ಪುರುಷನ ಸಾಮೀಪ್ಯ ಹೊಂದಿದ ಪ್ರಕೃತಿಯಿಂದ ಇಪ್ಪತ್ತಮೂರು ತತ್ತ್ವಗಳು ಕ್ರಮವಾಗಿ ಹೊಮ್ಮುತ್ತವೆ-ಎಂಬ ಸಾಂಖ್ಯ ಪ್ರಕ್ರಿಯೆಯನ್ನು ಪುರಾಣಗಳಲ್ಲಿ ಅನುಸರಿಸಿದೆ. ಇವನ್ನು ವೇದದ ಅಭಿಪ್ರಾಯಗಳೊಡನೆ ಸರಿಹೊಂದಿಸುವ ಯತ್ನ ನಡೆದಿದೆ. ಪುರುಷ ಪ್ರಧಾನ ಹಿರಣ್ಯ ಗರ್ಭ-ಬ್ರಹ್ಮ-ಬ್ರಹ್ಮ-ಅಹಂಕಾರ ಇವು ಪರಸ್ಪರ-ಪ್ರಕೃತಿಗಳೆರಡೂ ಒಂದೇ ಮೂಲದಿಂದ (ಪುರುಷೋತ್ತಮದಿಂದ) ಹುಟ್ಟಿವೆ ಎಂದು ಹೇಳಿದೆ.

 	ಮಹಾಭಾರತದಲ್ಲಿಯೂ ಸೃಷ್ಟಿವರ್ಣನೆ ಸೇರಿದೆ. ಇದು ಬೌದ್ಧಿಕ ಇತಿಹಾಸದಲ್ಲಿ ಮಧ್ಯಕಾಲವನ್ನು ಸೂಚಿಸುತ್ತದೆ. 
ಮನುಸ್ಮøತಿಯಲ್ಲಿಯೂ ಸೃಷ್ಟಿಕ್ರಮ ನಿರೂಪಣೆಯಿದೆ. ಮುಂದಿನ ಸಾಹಿತ್ಯದಲ್ಲಿ ಬಹುತೇಕ ಇದೇ ಉದಾಹೃತವಾಗಿದೆ. ಆದಿಯಲ್ಲಿ ಕತ್ತಲು ಕವಿದಿತ್ತು. ಕತ್ತಲನ್ನು ಹೋಗಲಾಡಿಸುತ್ತ ಸ್ವಯಂಭೂ ಕಾಣಿಸಿಕೊಳ್ಳುತ್ತಾನೆ. ಸೃಷ್ಟಿಸಬೇಕೆಂಬ ತನ್ನ ಸಂಕಲ್ಪದಿಂದ ಪ್ರಕಾಶಿಸಿದ; ಮೊದಲು ನೀರನ್ನು ಸೃಜಿಸಿ ಅದರಲ್ಲಿ ಬೀಜವನ್ನಿಟ್ಟ. ಅದು ಚಿನ್ನದ ಅಂಡವಾಯಿತು; ಅದರಲ್ಲಿ ಪುರುಷೋತ್ತಮ ತಾನೇ ಬ್ರಹ್ಮನಾಗಿ ಹುಟ್ಟಿದ; ನೀರು (ನಾರಾ) ಯಾರಿಗೆ ವಾಸಸ್ಥಾನ (ಆಯನ) ಆಗಿದ್ದಿತೋ ಅವನು (ಪುರುಷ) ನಾರಾಯಣ ಎನಿಸಿದ.

 	ಪುರಾಣಗಳಲ್ಲಿ ಇದೆ ಅಭಿಪ್ರಾಯಗಳು ವಿಸ್ತಾರವಾಗಿ, ಸಾಂಖ್ಯ ತತ್ತ್ವವೇದಗಳಿಗೆ ಅನುಕೂಲವಾಗುವಂತೆ ಬರುತ್ತವೆ. ಪುರುಷ ಪ್ರಕೃತಿಗಳು ಪರಮಾತ್ಮನ ಎರಡು ರೂಪಗಳೆಂದು ಹೇಳಿರುವುದನ್ನು ಗಮನಿಸಬಹುದು.

 	ಉದಾಹರಣೆಗೆ ವಿಷ್ಣುಪುರಾಣದ ಸೃಷ್ಟಿಕ್ರಮ ನಿರೂಪಣೆಯನ್ನು ನೋಡಬಹುದು. ಹಿಂದಕ್ಕೆ ಏನೂ ಇರಲಿಲ್ಲ-ಹಗಲಿಲ್ಲ, ರಾತ್ರಿಯಿಲ್ಲ, ಆಕಾಶವಿಲ್ಲ, ಭೂಮಿಯಿಲ್ಲ, ಕತ್ತಲೆ, ಬೆಳಕು ಯಾವುದೂ ಇರಲಿಲ್ಲ. ಅನಂತರ ವಿಷ್ಣುವಿನಿಂದ ಪುರುಷ ಪ್ರಧಾನ ಎಂಬ ಎರಡು ರೂಪಗಳು ಹೊರಬಂದವು. ಮುಂದೆ ವಿಷ್ಣು ತನ್ನಿಚ್ಛೆಯಿಂದಲೇ ಪುರುಷ ಪ್ರಧಾನರನ್ನು ಪ್ರವೇಶಿಸಿ ಅವುಗಳ ಸಮತ್ವವನ್ನು ಕಲಕಿದ. ಇದರಿಂದ ಮಹತ್ ತತ್ತ್ವ ಹುಟ್ಟಿತು. ಅದರಿಂದ ಅಹಂಕಾರ ತತ್ತ್ವ ಮೂಡಿತು. ಇದು ಆಕಾಶಾದಿಭೂತಗಳಿಗೂ ಇಂದ್ರಿಯಗಳಿಗೂ ಕಾರಣ. ಆಕಾಶಾದಿ ಭೂತಗಳು ಸ್ವತಂತ್ರವಾಗಿದ್ದಾಗ ಸೃಷ್ಟಿ ಸಾಧ್ಯವಾಗಲಿಲ್ಲ. ಅವೆಲ್ಲವೂ ಪಂಚೀಕರಣ ಕ್ರಮದಲ್ಲಿ ಸೇರಿದಾಗ ಸೃಷ್ಟಿಗೆ ಅನುಕೂಲವಾಯಿತು. ಭೂತಗಳ ಸಂಯೋಗದಿಂದ ಪಿಂಡವೊಂದು ಬೆಳೆಯಿತು. ಅದರಲ್ಲಿ ವಿಷ್ಣುವೇ ಸೇರಿಕೊಂಡು ಬ್ರಹ್ಮನಾಗಿ ಹೊರಗೆ ಬಂದ. ಅನಂತರ ಜಗತ್ ಸೃಷ್ಟಿಯಾಯಿತು ಇದು ಮೊದಲ ಸೃಷ್ಟಿ. ಪ್ರಕೃತ ಕಲ್ಪದ ಸೃಷ್ಟಿ : ಕಳೆದ ಕಲ್ಪದ ರಾತ್ರಿಯಿಂದ ಎಚ್ಚೆತ್ತ ಪ್ರಭೂ ಸತ್ತ್ವಗುಣದಿಂದ ಕೂಡಿದವನಾಗಿ ಶೂನ್ಯವಾದ ಜಗತ್ತನ್ನು ಕಂಡ ಭೂಮಿ ನೀರಿನಲ್ಲಿರುವುದನ್ನು ತಿಳಿದು ಅದನ್ನು ಮೇಲಕ್ಕೆತ್ತಲು ವರಾಹರೂಪ ಧರಿಸಿದ. ಭೂಮಿಯನ್ನು ಮೇಲಕ್ಕೆತ್ತಿ ಸಮುದ್ರದಲ್ಲಿ ತೇಲಿ ಬಿಟ್ಟು ಅದನ್ನು ಸಮಮಾಡಿದ. ಹಿಂದಿನ ಕಲ್ಪದ ಕೊನೆಯಲ್ಲಿ ದಗ್ಧವಾದ ಪರ್ವತವೇ ಮೊದಲಾದುವನ್ನೂ ಲೋಕಗಳನ್ನೂ ದ್ವೀಪಗಳನ್ನೂ ಹಿಂದಿನಂತೆ ಸೃಷ್ಟಿಸಿದ.

 	ಜಗತ್ತಿನ ನಿವಾಸಿಗಳು : ನಾನಾಲೋಕಗಳ ನಿವಾಸಿಗಳ ವಿಷಯದಲ್ಲಿ ಒಮ್ಮತವಿಲ್ಲ. ಪಾತಾಳಲೋಕಗಳಲ್ಲಿ ಸಮುದ್ರಗಳಲ್ಲಿ ಭೂಮಿಯ ಪರ್ವತಗಳ ಮೇಲೆ ಈ ದೇವನಿಕಾಯಗಳು ವಾಸಮಾಡುತ್ತವೆ : ಅಸುರ, ಗಂಧರ್ವ, ಕಿನ್ನರ, ಕಿಂಪುರುಷ, ಯಕ್ಷ, ರಾಕ್ಷಸ, ಭೂತ, ಪ್ರೇತ, ಅಪಸ್ಮಾರಕ, ಅಪ್ಸರಸ್, ಬ್ರಹ್ಮರಾಕ್ಷಸ, ಕೂಷ್ಮಾಂಡ, ವಿನಾಯಕ ಖಂಡಗಳಲ್ಲಿ ದೇವತೆಗಳು ಮತ್ತು ಮಾನವರು ವಾಸಿಸುತ್ತಾರೆ. ಮೇರು ಪರ್ವತದ ಮೇಲೆ ದೇವತೆಗಳ ಉದ್ಯಾನವನ ಮತ್ತು ಅರಮನೆಗಳಿವೆ. ಮಾಹೇಂದ್ರಲೋಕದಲ್ಲಿ ಆರು ಬಗೆಯ ದೇವತಾ ಸಮೂಹಗಳಿವೆ : ತ್ರಿದಶರು, ಅಗ್ನಿಷ್ವಾತ್ತರು, ಯಾಮ್ಯರು, ತುಷಿತರು, ಅಪರಿನಿರ್ಮಿತ ವಶವರ್ತಿಗಳು, ಪರಿನಿರ್ಮಿತ ವಶವರ್ತಿಗಳು, ಪ್ರಜಾಪತ್ಯ ಲೋಕದಲ್ಲಿ ಕುಮುದರು, ಋಭುಗಳು ಪ್ರತರ್ದನರು, ಅಂಜನಾಭರು, ಪ್ರಚಿತಾಭರು ಎಂಬ ಐದು ದೇವತಾಸಮೂಹಗಳಿವೆ. ಜನಲೋಕದಲ್ಲಿ ಬ್ರಹ್ಮ ಪುರೋಹಿತರು, ಬ್ರಹ್ಮಕಾಯಿಕರು, ಅಮರರು ಎಂಬ ನಾಲ್ಕು ದೇವತಾ ಸಮೂಹ ಅಥವಾ ಸನಂದನಾದಿ ಬ್ರಹ್ಮಪುತ್ರರು ಇದ್ದಾರೆ. ತಪೋಲೋಕದಲ್ಲಿ ವೈರಾಜ ದೇವತೆಗಳು ಇದ್ದಾರೆ. ಸತ್ಯಲೋಕದಲ್ಲಿ ನಾಲ್ಕು ವರ್ಗಗಳು : ಅಂಜನರು, ಶುದ್ಧ ನಿವಾಸರು, ಸತ್ಯಾಭರು, ಸಂಜ್ಞಾಸಂಜಿû್ಞಗಳು, ಪ್ರಜಾಪತ್ಯ ಮತ್ತು ಮೇಲಿನ ಲೋಕಗಳ ನಿವಾಸಿಗಳಿಗೆ ಧ್ಯಾನವೇ ಆಹಾರ. ಅವರ ಶಕ್ತಿ ಅನುಕ್ರಮವಾಗಿ ಹೆಚ್ಚು. ತಪೋಲೋಕದ ನಿವಾಸಿಗಳಿಗೆ ಕೆಳಗಿನ ಲೋಕಗಳಲ್ಲಿ ಪುನರ್ಜನ್ಮವಿಲ್ಲ. ಸತ್ಯಲೋಕದ ನಾಲ್ಕು ಸಮೂಹಗಳು ನಾಲ್ಕು ಹಂತಗಳಲ್ಲಿ ಕ್ರಮವಾಗಿ ಆನಂದವನ್ನು ಅನುಭವಿಸುತ್ತಾರೆ: ಸವಿತರ್ಕ, ಸವಿಚಾರ ಆನಂದ ಮಾತ್ರ, ಅಸ್ಮಿತಾ ಮಾತ್ರ ಧ್ಯಾನ.

 	ಜೈನರಲ್ಲಿ ಜಗತ್ ಕಲ್ಪನೆ : ಜಗತ್ತು ಶಾಶ್ವತ, ಅನಾದಿ, ಅನಂತ, ಆದ್ದರಿಂದ ಸೃಷ್ಟಿವಿಚಾರವೇ ಇವರಲ್ಲಿ ಬರದು. ಪ್ರಕೃತಿಯ ಗುಣಕ್ಕೆ ಅನುಗುಣವಾಗಿ ರೂಪುಗೊಂಡಿರುವುದೇ ಜಗತ್ತು. ಜೀವ, ಅಜೀವ, ಕಾಲ, ಆಕಾಶ, ಧರ್ಮ, ಅಧರ್ಮಗಳೆಂಬ ಆರು ದ್ರವ್ಯಗಳು ಅವಿನಾಶಿ. ಇವು ರೂಪಾಂತರ ಹೊಂದುತ್ತವೆ. ಇದು ಇವುಗಳ ಸ್ವಭಾವ; ಅಂತೆಯೇ ಉತ್ಪತ್ತಿ, ಸ್ಥಿತಿ, ವಿನಾಶ ಎಂಬ ಅವಸ್ಥೆಗಳು ಒದಗುತ್ತವೆ.

 	ವಿಶ್ವದಲ್ಲಿ ಲೋಕಾಕಾಶ, ಅಲೋಕಾಕಾಶ ಎಂದು ಎರಡು ಭಾಗವಿದೆ. ಜೀವ ಲೋಕಾಕಾಶವನ್ನು ಬಿಟ್ಟು ಹೋಗಲಾರದು. ಪ್ರಪಂಚದ ಇರುವಿಕೆಗೆ ಅಗತ್ಯವಾದ ಆರು ದ್ರವ್ಯಗಳು ಇರುವುದು ಲೋಕಾಕಾಶದಲ್ಲಿಯೇ. ಅದಕ್ಕೆ ಮುಂದೆ ಅಲೋಕಾಕಾಶ; ಅದು ಶುದ್ಧ ಶೂನ್ಯ. ಲೋಕಗಳು ಒಂದರ ಮೇಲೊಂದು ಇವೆ. ಲೋಕಗಳ ಕೆಳಭಾಗ ಬೆತ್ತದ ಕುರ್ಚಿಯಂತಿದೆ. ಮಧ್ಯಭಾಗ ಚಪ್ಪಟೆಯಾಗಿದೆ. ಇದರ ಮೇಲೆ ಮೃದಂಗವನ್ನು ನೆಟ್ಟಗೆ ಇರಿಸಿದಂತಿದೆ. ಇದು ಹೆಂಗಸೊಬ್ಬಳು ನಡುವಿನ ಮೇಲೆ ಕೈಯಿಟ್ಟುಕೊಂಡಂತೆ ಕಾಣುತ್ತದೆ. ಆಕಾಶದ ಮಧ್ಯೆ ಘನೋದಧಿ, ಘನವಾತ ಮತ್ತು ತನುವಾತಗಳಿವೆ. ಲೋಕಗಳ ಮಧ್ಯೆ ಕೆಳಗಿನಿಂದ ಮೇಲಕ್ಕೆ ತ್ರಸನಾಳ; ಇಲ್ಲಿ ಓಡಾಡುವ ಜೀವಿಗಳಿವೆ. ಉಳಿದ ಭಾಗದಲ್ಲಿ ಸ್ಥಾವಿರ.

 	ಮಧ್ಯಭಾಗದಲ್ಲಿ ಪೃಥ್ವಿ. ಇದರ ಮೇಲಿನ ಮಹಾಮೇರುವಿನ ತುದಿಯಿಂದ ಮೇಲಕ್ಕೆ ಮೋಕ್ಷದ ವರೆಗೆ ಮೇಲಿನ (ಊಧ್ರ್ವ) ಲೋಕಗಳು. ಕೆಳಕ್ಕೆ ಏಳು ಕೆಳಗಿನ (ಅಧೋ) ಲೋಕಗಳು ಅಥವಾ ನರಕಗಳು. ಕೆಳಗಿನಿಂದ ಮೇಲಕ್ಕೆ ನರಕಗಳು : ಮಹಾತಮಃಪ್ರಭಾ, ತಮಃಪ್ರಭಾ, ಧೂಮಪ್ರಭಾ, ಪಂಕಪ್ರಭಾ, ವಾಲುಕಾಪ್ರಭಾ, ಶರ್ಕರಾಪ್ರಭಾ ಮತ್ತು ರತ್ನಪ್ರಭಾ. ಉಮಾಸ್ವಾತಿ ಇನ್ನೊಂದು ಗುಂಪನ್ನು ಹೆಸರಿಸುತ್ತಾನೆ : ಮಾಧವೀ, ಮಾಧವ್ಯಾ, ಅರಿಷ್ಟಾ, ಅಂಜನಾ, ಶೈಲಾ, ವಂಶಾ, ಧರ್ಮಾ, ಕೆಳಗಿನದರಲ್ಲಿ ಐದು ಮೇಲಿನದರಲ್ಲಿ ಮೂರು ದಶಲಕ್ಷ ನರಕಗಳಿವೆ. ಇಲ್ಲಿನ ನಿವಾಸಿ-ನಾರಕಿಗಳಿಗೆ ಅವಧಿಯಿದೆ; ಹತ್ತುಸಾವಿರದಿಂದ ಮೂವತ್ಮೂರು ಸಮುದ್ರವರ್ಷಗಳು; ಅನಂತರ ಇತರ ಜೀವಕೋಶಗಳಲ್ಲಿ ಹುಟ್ಟು. ನರಕಕ್ಕೂ ನರಲೋಕಕ್ಕೂ ಮಧ್ಯೆ ನಾಗಲೋಕ ಅಥವಾ ಭವನಲೋಕ; ಇದು ಭವನಾವಾಸಿ ದೇವತೆಗಳ ಆವಾಸಸ್ಥಾನ. ಇವುಗಳ ಮೇಲೆ ಪೃಥಿವೀ. ಅನೇಕ ಖಂಡಗಳಿವೆ. ಅಸಂಖ್ಯಾತ ದ್ವೀಪಗಳಿವೆ. ಇವುಗಳು ಸಮಾನಕೇಂದ್ರ ವೃತ್ತಗಳಂತೆ ಒಂದರ ಸುತ್ತ ಒಂದು ಇವೆ. ಸಾಗರಗಳು ಖಂಡಗಳನ್ನು ಬೇರ್ಪಡಿಸುತ್ತವೆ. ಪ್ರಥಿವಿಯ ಮಧ್ಯೆ ಲಕ್ಷಯೋಜನ ಎತ್ತರವಾದ ಮಹಾಮೇರುಪರ್ವತ ನಿಂತಿದೆ. ಮೇರುವಿನಿಂದ 790 ಮಹಾಯೋಜನದಲ್ಲಿ ತಾರಾಮಂಡಲ; ಜ್ಯೋತಿರ್ಲೋಕ 110 ಯೋಜನ ದಪ್ಪವಾಗಿದೆ. ಮೇರುವಿನ ಸುತ್ತ ಸೂರ್ಯಚಂದ್ರರು, ನಕ್ಷತ್ರಗಳು ಜ್ಯೋತಿಷ್ಯ ದೇವತೆಗಳು ಸುತ್ತುತ್ತಾರೆ. ಅದರ ಮೇಲೆ ಸ್ವರ್ಗಲೋಕಗಳು. ಒಂದರ ಮೇಲೊಂದು ಮೂರು ಗುಂಪುಗಳಲ್ಲಿವೆ. ಇವನ್ನು ವಿಮಾನ ಎನ್ನುವರು. 1 ಹನ್ನೆರೆಡು ಕಲ್ಪಗಳು : ಸೌಧರ್ಮ, ಐಶಾನ, ಸನತ್‍ಕುಮಾರ, ಮಾಹೇಂದ್ರ, ಬ್ರಹ್ಮಲೋಕ, ಲಾಂತಕ, ಮಹಾಶುಕ್ರ, ಸಹಸ್ರಾರ, ಆನತ, ಪ್ರಾನತ, ಆರಣ, ಅಚ್ಯುತ (ದಿಗಂಬರರು-ಲಾಂತಕಕ್ಕೆ ಮೊದಲು ಬ್ರಹ್ಮೋತ್ತರವನ್ನೂ ಅದರ ಅನಂತರ ಕಪಿಷ್ಠ ಮತ್ತು ಶುಕ್ರವನ್ನೂ ಮಹಾಶುಕ್ರದ ಅನಂತರ ಶತಾರವನ್ನೂ ಸೇರಿಸುತ್ತಾರೆ). 2 ಒಂಬತ್ತು ಗ್ರೈವೇಯಕಗಳು-ಜಗತ್ತನ್ನು ಪುರುಷನನ್ನಾಗಿ ಭಾವಿಸಿದಾಗ ಕುತ್ತಿಗೆಯ ಸ್ಥಾನಕ್ಕೆ ಬರುವಂಥವು. ಆದ್ದರಿಂದ ಈ ಹೆಸರು. 3 ಐದು ಅನುತ್ತರ ವಿಮಾನಗಳು : ವಿಜಯ, ವೈಜಯಂತ, ಜಯಂತ, ಅಪರಾಜಿತ, ಸರ್ವಾರ್ಥಸಿದ್ಧಿ. ಈ ವಿಮಾನಗಳ ದೇವತೆಗಳಿಗೆ ಎರಡು ಬಾರಿಗಿಂತ ಹೆಚ್ಚಾಗಿ ಪುನರ್ಜನ್ಮವಿಲ್ಲ. ಸರ್ವಾರ್ಥಸಿದ್ಧಿಯ ಮೇಲೆ-ಜಗತ್ತಿನ ತುದಿಯಲ್ಲಿ-ಈಷತ್ ಪ್ರಾಗ್ಭಾರ ಎಂಬ ಪ್ರದೇಶವಿದೆ. ಅಲ್ಲಿ ಸಿದ್ಧಶಿಲೆಯಿದೆ. ಈ ಪ್ರದೇಶದಲ್ಲಿ ಜೀವಗಳು ನಿರ್ವಾಣಸ್ಥಿತಿಯಲ್ಲಿರುತ್ತಾರೆ. 	(ಆರ್.ಎಸ್.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ